ವೈಜ್ಞಾನಿಕತೆ
-	ಯಾವುದೇ ಸಮಸ್ಯೆಗೆ ಪರಿಹಾರ ಅರಸುವಾಗ ವೈಜ್ಞಾನಿಕ ವಿಧಾನವನ್ನು (ನೋಡಿ- ವೈಜ್ಞಾನಿಕ-ವಿಧಾನ) ಅನುಸರಿಸುವಾತನ ಮನಃಸ್ಥಿತಿ (ಸೈಂಟಿಸಮ್). ವೈಜ್ಞಾನಿಕ ಮನೋಧರ್ಮ (ಸೈಂಟಿಫಿಕ್ ಟೆಂಪರ್) ಪರ್ಯಾಯ ಪದ. ಇಂಥ ಸ್ಥಿತಿ ಐದಿರುವ ಮನಸ್ಸಿನ ಪ್ರಧಾನ ಲಕ್ಷಣಗಳು : ಪರಿಪೂರ್ಣ ಜ್ಞೇಯನಿಷ್ಠತೆ (ವಸ್ತುನಿಷ್ಠತೆ, ಆಬ್ಜೆಕ್ಟಿವಿಟಿ), ಸಮಸ್ಯೆಯ ವಿನಾ ಉಳಿದೆಲ್ಲವುಗಳ ಬಗ್ಗೆ ನಿರ್ಲಕ್ಷ್ಯ, ವೈಯಕ್ತಿಕತೆಯ (ಅಥವಾ ನಾನು ಎನ್ನುವ ಭಾವನೆಯ) ಗೈರುಹಾಜರಿ. ವೈಜ್ಞಾನಿಕತೆ ಪದ ಮೂಲತಃ ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನ (ನೋಡಿ- ವೈಜ್ಞಾನಿಕ-ವಿಧಾನ) ಪದಗಳ ವ್ಯುತ್ಪನ್ನ. ಆದರೆ ಇದರ ಅನ್ವಯ ಮಾತ್ರ ಸಾರ್ವತ್ರಿಕ. ಬದುಕಿನಲ್ಲಿ ಎದುರಾಗುವ ಸಮಸ್ತ ಸಮಸ್ಯೆಗಳನ್ನೂ ವೈಜ್ಞಾನಿಕ ಮನೋಧರ್ಮ ತಳೆದು ಎದುರಿಸಿದರೆ ಮನುಕುಲದ ನಿರಂತರ ಸಂಗಾತಿಗಳಾಗಿರುವ ಕೋಪ, ದ್ವೇಷ, ಆತಂಕ, ಮೋಹ ಮುಂತಾದ ರಾಗಭಾವಗಳು ದೂರವಾಗುತ್ತವೆ ಮತ್ತು ಯುಕ್ತ ಪರಿಹಾರಗಳು ಸಿದ್ಧಿಸುತ್ತವೆ.		
	*

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ